ಮರೆಯಲ್ಲಿ
ನಿಂತು ಮೆರವಣಿಗೆ ನೋಡಿದಾಗ.....
ಇಲ್ಲಿ ಎಲ್ಲವೂ ನಡೆಯುತ್ತವೆ.
ನಡೆಯುವುದಷ್ಟೇ ಅಲ್ಲ ಓಡುತ್ತವೆ - ಓಡದೇ
ಬೇರೆ ‘ಗತಿ’ಯೇ ಇಲ್ಲ ಎಂಬ
ಹಾಗೆ. ಬದುಕ ಬೇಕಾದರೆ ಓಡಲೇ
ಬೇಕು ಎಂದು ಕೆಲವರು ನಿಟ್ಟುಸಿರು
ಬಿಡುತ್ತಾ (ಓಡಿ. ಓಡಿ ದಣಿದದ್ದರಿಂದಿರಬಹುದೇ?)
ಹೇಳುವುದನ್ನು ಕೇಳಿದ್ದೇನೆ.
ಅದೂ ಹೌದೆನ್ನಿ; ಹಸಿವಿನಿಂದ
ಸಾಯುತ್ತಿರುವ ಹುಲಿಯೊಂದು ಜಿಂಕೆಗಿಂತ ವೇಗವಾಗಿ ಓಡಿ ಅದನ್ನು
ಹಿಡಿದರಷ್ಟೇ ಬದುಕಬಹುದು. ಜಿಂಕೆ ಬದುಕಬೇಕಾದರೆ ಹುಲಿಗಿಂತ
ವೇಗವಾಗಿ ಓಡಬೇಕು;
ಓಡಿ ಬದುಕಬೇಕು. ಚಲನೆ ಜಗದ ನಿಯಮ.
ಇಲ್ಲಿ ಬದಲಾವಣೆಯಲ್ಲದೇ ಮತ್ತೇನೂ ಸಂಭವಿಸುವುದೇ ಇಲ್ಲ.
ಜಗತ್ತು ಅಷ್ಟು ಗತಿಶೀಲವಾದದ್ದು.
ಇಲ್ಲಿ ಎಲ್ಲವೂ ಚಲಿಸುತ್ತಿವೆ
ಅಂದೆನಲ್ಲವೆ? ಹಾಗಾದರೆ ಯಾವುದೂ ನಿಶ್ಚಲವಾಗಿಲ್ಲವೇ?
ಇಲ್ಲ ಎಂದು ಅಷ್ಟು ಸ್ಪಷ್ಟವಾಗಿ
ಹೇಳಲು ಸಾಧ್ಯವಿಲ್ಲ. ಏಕೆಂದರೆ ಚಲನೆ ಸಾಪೇಕ್ಷವಾದುದು.
ಒಂದು
ವಸ್ತು ಚಲಿಸುತ್ತಿದೆಯೇ ಅಥವಾ ನಿಶ್ಚಲವಾಗಿದೆಯೇ ಎಂದು
ಇನ್ನೊಂದು ನಿಶ್ಚಿತ ಬಿಂದುವನ್ನು ಆಧಾರವಾಗಿಟ್ಟುಕೊಂಡರಷ್ಟೇ
ಹೇಳಲು ಸಾಧ್ಯ. ಆಧಾರಬಿಂದುವನ್ನು ಬದಲಿಸಿಬಿಟ್ಟರೆಂದರೆ
ವಸ್ತು ಚಲನೆಯಲ್ಲಿದೆಯೇ ಅಥವಾ ಇಲ್ಲವೇ ಎಂಬ
ತೀರ್ಮಾನವೂ ಬದಲಾಗಿ ಬಿಡಬಹುದು. ಒಂದು
ನಿಶ್ಚಿತ ಬಿಂದುವಿಗೆ ಆಧಾರವಾಗಿ ವಸ್ತುವೊಂದು ಕಾಲದೊಂದಿಗೆ ಮಾಡಿದ ಸ್ಥಾನಪಲ್ಲವೇ ಚಲನೆ.
ಉದಾಹರಣೆಯೊಂದು ಗೊಂದಲವನ್ನು ಸ್ವಲ್ಪ ಕಡಿಮೆ ಮಾಡಬಲ್ಲದು.
ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾತ ಒಂದು ಊರಿನಿಂದ ಇನ್ನೊಂದು
ಊರಿಗೆ ಚಲಿಸುತ್ತಾನೆ. ಮೊದಲನೇ ಊರನ್ನು ಆಧಾರವಾಗಿಟ್ಟುಕೊಂಡು
ನಾವು ಆತ ‘ಚಲಿಸಿದ್ದಾನೆ’ ಎಂದು ಹೇಳುತ್ತೇವೆ. ಬಸ್ಸಿನಲ್ಲಿ
ಪ್ರಯಾಣಿಸುತ್ತಿರುವಾತ ತನ್ನ ಪಕ್ಕದಲ್ಲಿರುವ ಸೂಟ್ಕೇಸ್ ಚಲಿಸುತ್ತಿಲ್ಲ ಎಂದೇ
ಭಾವಿಸುತ್ತಾನೆ. ತನ್ನನ್ನೇ ಆಧಾರಬಿಂದುವಾಗಿಸಿಕೊಂಡು ಆತ ಈ ನಿರ್ಧಾರಕ್ಕೆ
ಬಂದಿರುತ್ತಾನೆ. ದಿಢೀರನೆ ಬ್ರೇಕ್ ಹಾಕಿದರಷ್ಟೇ
ಸೂಟ್ಕೇಸ್ ಮುಂದಕ್ಕೆ ಚಲಿಸಬಲ್ಲದು,
ಇಲ್ಲದಿದ್ದರೆ ಅದು ಆತನ ಪ್ರಕಾರ
ನಿಶ್ಚಲ. ಬಸ್ಸಿನ ಹೊರಗಿರುವ ಯಾವುದೇ
ಆಧಾರಬಿಂದುವಿಗೆ ಹೋಲಿಸಿದರೆ ಬಸ್ಸು ಅದರಲ್ಲಿರುವ ಪ್ರಯಾಣಿಕರು,
ಸೂಟ್ಕೇಸ್ ಎಲ್ಲವೂ ಚಲಿಸುತ್ತವೆ.
ಸಂಪರ್ಕಕ್ರಾಂತಿಗೆ ಪ್ರಮುಖ ಕಾರಣವಾದ ಭೂಸ್ಥಿರ
ಉಪಗ್ರಹಗಳನ್ನೇ ತೆಗೆದುಕೊಳ್ಳಿ. ಇವು ಭೂಮಿಯ ಮೇಲಿನ
ಒಂದು ಬಿಂದುವಿನ ಮೇಲೆ ನಿಶ್ಚಲವಾಗಿ ನಿಂತಿರುತ್ತವೆ.
ಐಫೆಲ್ನ ತುತ್ತ ತುದಿಯ
ಮೇಲೆ ಕಾಗೆಯೊಂದು ಕುಳಿತಿದ್ದರೆ ಹೇಗೋ ಹಾಗೆ. ಉಪಗ್ರಹವೆಂದ
ಮೇಲೆ ಅವು ಭೂಮಿಯನ್ನು ಸುತ್ತಬೇಕಲ್ಲ?
ಸುತ್ತುತ್ತವೆ ಅದೂ ನಿಶ್ಚಲವಾಗಿರುತ್ತವೆ.
ಭೂಮಿಯ ಸಮಭಾಜಕÀ ವೃತ್ತದ
ಸಮತಲದಲ್ಲಿಯೇ ತನ್ನ ಕಕ್ಷೆಯನ್ನು ಹೊಂದಿರುವ
ಮತ್ತು ಭೂಮಿಯ ಭ್ರಮಣ ದಿಕ್ಕಿನಲ್ಲಿಯೇ
ಭೂಮಿಯನ್ನು ಪರಿಭ್ರಮಿಸುವ ಕೃತಕ ಉಪಗ್ರಹವೊಂದರ ಪರಿಭ್ರಮಣ
ಅವಧಿಯು ಭೂಮಿಯ ಭ್ರಮಣದ ಅವಧಿಗೆ
ಸಮನಾಗಿದ್ದರೆ (24 ಗಂಟೆಗಳು) ಅದನ್ನು ಭೂಸ್ಥಿರ ಉಪಗ್ರಹ
ಎನ್ನುತ್ತಾರೆ. ಇವು ಭೂಮಿಯ ಮೇಲಿನ
ಯಾವುದೇ ಬಿಂದುವಿಗೆ ಸಾಪೇಕ್ಷವಾಗಿ ನಿಶ್ಚಲವಾಗಿರುತ್ತವೆ. ಭೂಮಿಯಿಂದ ಹೊರಗೆ ನಿಂತು ನೋಡಿದಾಗಷ್ಟೆ
ಇವುಗಳು ‘ಚರ’ ಎಂದೆನಿಸಿಕೊಳ್ಳುತ್ತವೆ.
ಹೀಗೆ ಭೂಮಿಯಿಂದ ಹೊರಗೆ
ನಿಂತು (?) ನೋಡಿದರೆ ಬಸ್ನಲ್ಲಿರುವ
ಪ್ರಯಾಣಿಕರಷ್ಟೇ ಅಲ್ಲ ಬಸ್ ಸ್ಟ್ಯಾಂಡಿನಲ್ಲಿ
ಪೇಪರ್ ಓದುತ್ತಾ ಕುಳಿತಿರುವ ದಪ್ಪ
ಮೀಸೆಯ ಧಡೂತಿಯೂ ಚಲಿಸುತ್ತಿರುವುದು ತಿಳಿಯುತ್ತದೆ.
ಆ ಬಸ್ ಸ್ಟ್ಯಾಂಡು
ಸಮಭಾಜಕ ವೃತ್ತದ ಮೇಲೆ 0 ಅಕ್ಷಾಂಶದಲ್ಲಿದ್ದರೆ
ಆತ ಗಂಟೆಗೆ 1665 ಕಿಲೋಮೀಟರ್ ಜವದಲ್ಲಿ(Speed) ಭೂ ಕೇಂದ್ರವನ್ನು
ಸುತ್ತುತ್ತಿರುತ್ತಾನೆ. ಸೂರ್ಯನಿಂದ ನೋಡಿದರೆ ಇನ್ನೂ ಬೇರೆ
ವಿಚಾರ ತಿಳಿಯುತ್ತದೆ. ಆತ, ಆತನಿರುವ ಬಸ್
ಸ್ಟ್ಯಾಂಡ್ ಮತ್ತು ಇವೆಲ್ಲವನ್ನೂ ಹೊತ್ತಿರುವ
ಭೂಮಿ ಗಂಟೆಗೆ 96,000 ಕಿಲೋ ಮೀಟರ್ ವೇಗದಲ್ಲಿ
ಸೂರ್ಯನನ್ನು ಸುತ್ತುತ್ತಿವೆ. ಇನ್ನೂ ಸ್ವಲ್ಪ ಮುಮದೆ
ಹೋಗಿ ನಮ್ಮ ಪಕ್ಕದ ಅಂಡ್ರೋಮಿಡಾ
ಗ್ಯಾಲಕ್ಸಿಯ ಅಂಚಿನಲ್ಲಿ ಕುಳಿತು ಕದ್ದು ನೋಡಿದರೆ
ಈ ದಪ್ಪ ಮೀಸೆಯ
ಧಡೂತಿ ಆಸಾಮಿ ತಾನಿರುವ ಸೌರವ್ಯೂಹದ
ಜೊತೆಗೆ ಹಾಲು ಹಾದಿ (Milky
Way) ಗ್ಯಾಲಕ್ಸಿಯ ಕೇಂದ್ರದ ಸುತ್ತ ಗಂಟೆಗೆ
8,48,000 ಕಿಲೋ ಮೀಟರ್ ಜವದಲ್ಲಿ ಚಲಿಸುತ್ತಿರುತ್ತಾನೆ.
ಇವೆಲ್ಲವನ್ನೂ ಒಟ್ಟು ಸೇರಿಸಿದರೆ ಆತನ
ಚಲನೆಯ ಜವ ಸುಮಾರು ಗಂಟೆಗೆ
9,45,666 ಕಿಲೋ ಮೀಟರ್ಗಳಷ್ಟಾಗುತ್ತದೆ.
ತಲೆ ಸುತ್ತಲು ಪ್ರಾರಂಭವಾಯಿತೇ?
ಹಾಗಾದರೆ ಇದನ್ನಿಲ್ಲಿಗೇ ಬಿಟ್ಟುಬಿಡಿ . ಏಕೆಂದರೆ ದಪ್ಪ ಮೀಸೆಯ
ಆ ಧಡೂತಿ ಮನುಷ್ಯ
ನಮ್ಮ ಲೆಕ್ಕಾಚಾರವನ್ನೂ ಮೀರಿ ಇನ್ನೂ ಕ್ಷಿಪ್ರವಾಗಿ
ಚಲಿಸುತ್ತಿದ್ದಾನೆ.ಏಕೆಂದರೆ,ಆತನ ಜೊತೆಗೆ ಇಡೀ ವಿಶ್ವವೇ ಅಸಾಧ್ಯ ವೇಗದಲ್ಲಿ
ಹಿಗ್ಗುತ್ತಿದೆ.
ಉದಯ ಗಾಂವಕಾರ

kanasinathe basavaguva e vishaya nijakku amazing..
ಪ್ರತ್ಯುತ್ತರಅಳಿಸಿ!
ಪ್ರತ್ಯುತ್ತರಅಳಿಸಿ