ನಗು…ನೀ ನಗು
ನಗುವನ್ನು ವಿಶ್ಲೇಷಿಸುವುದೆಂದರೆ ಜೀವಶಾಸ್ತ್ರದ ವಿದ್ಯಾರ್ಥಿಯೊಬ್ಬಕಪ್ಪೆಯನ್ನು ಸೀಳಿದಂತೆ - ಅದೇನೆಂದು ಗೊತ್ತಾಗುತ್ತದೆ. ಆದರೆ ಕಪ್ಪೆ ಸಾಯುತ್ತದೆ. ಈ.ಬಿ.ವೈಟ್ ರ ಈ ಬುದ್ಧಿವಾದವನ್ನು ಮೀರಿ ನಾನೀಗ ಕಪ್ಪೆಯನ್ನು ಸೀಳಲು ಹೊರಟಿದ್ದೇನೆ.
ನಗು ಮನುಷ್ಯನ ಗುತ್ತಿಗೆಯೇನೂ
ಅಲ್ಲ. ನಮ್ಮ ಪೂರ್ವ ಸಂಬಂಧಿಗಳಾದ
ಚಿಂಪಾಂಜಿ, ಗೋರಿಲ್ಲಾಗಳೂ ನಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಹೊಟ್ಟೆಯ ಮೇಲೆ
ಕೈಬೆರಳಿಟ್ಟು ಕಚಗುಳಿ ಮಾಡಿದರೆ ಇಲಿ
ಕೂಡಾ ನಗುತ್ತದೆ! ಆದರೆ,ಇಲಿ ನಕ್ಕ್ಕಿದ್ದನ್ನು ತಿಳಿಯಲು
ಆಧುನಿಕ ಸಂವೇಧನಾ ಗ್ರಾಹಕ ಉಪಕರಣಗಳು
ಅಗತ್ಯ.
ನಿರೀಕ್ಷಿಸಿದ್ದ ಉದ್ವಿಗ್ನ ಸನ್ನಿವೇಶಗಳು, ಸಂಭವಿಸದೇ ಕರಗಿ ಶೂನ್ಯವಾದಾಗ ನಗು ಅರಳುತ್ತದೆ ಎಂದು
ಕಾಂಟ್ ಎಂಬ ಮನೋವಿಜ್ಞಾನಿ ವಿಶ್ಲೇಷಿಸಿದ್ದಾರೆ.
ಜೋಕ್ ಗಳು, ಕಾಮೆಡಿ ಸಿನೆಮಾಗಳೂ ಹೀಗೆ
ಕೊನೆಗೊಮ್ಮೆ ನಮ್ಮನ್ನು ನಿರಾಳವಾಗಿಸುವ ಮೂಲಕ ನಗಿಸುತ್ತವೆ. ನಗಬೇಕೆಂದರೆ
ಆಟವಾಡುವ ಮನಸ್ಸು ಬೇಕು. ದೊಡ್ಡವರಿಗಿಂತ
ಚಿಕ್ಕ ಮಕ್ಕಳು ಹೆಚ್ಚು ನಗುವುದು,
ಗಂಡಸರಿಗಿಂತ ಹೆಂಗಸರೇ ಹೆಚ್ಚು ನಗುವುದು
ಆ ಕಾರಣಕ್ಕಾಗಿ!
ಅನೇಕ ಜನ ಹಠ
ಹಿಡಿದು ಮಗುವನ್ನು ಬಿಗಿ ಹಿಡಿದುಕೊಂಡಿರುತ್ತಾರೆ-ಮೂತ್ರಕ್ಕೆ
ಹೋಗದೇ ಕೆಲವರು ಬಿಗಿ ಹಿಡಿದುಕೊಂಡಿರುತ್ತಾರಲ್ಲ
ಹಾಗೆ. ಆದರೆ ಸುಖವಿರುವುದು ಮೂತ್ರ
ಮಾಡುವಾಗ, ಆಮೊದಲಲ್ಲಿ. ತನ್ನ ಕೆಳ ನೌಕರರು
ತುಂಡರಿಸುವ ಜೋಕುಗಳಿಗೆ ಬಾಯ್ತುಂಬಾ ನಕ್ಕರೆ ಅವರೆದುರು ಹಗುರವಾಗಿ
ತೋರಬಹುದೆಂಬ ಭಯ ಕೆಲವು ಮೇಲಾಧಿಕಾರಿಗಳನ್ನು
ಕಾಡುತ್ತದೆ. ನಕ್ಕರೆ ಹಗುರವಾಗುವುದು ಹೌದು,
ಆದರೆ ಅವರು ತಿಳಿದ ಅರ್ಥದಲ್ಲಲ್ಲ.
ಮೈ - ಮನಸ್ಸುಗಳ ಒತ್ತಡವನ್ನು ಕಳೆದುಕೊಂಡು ನಗುವಾತ ಹಗುರವಾಗುತ್ತಾನೆ.
ನಗುವಿನ ಮೇಲೆ ನಮ್ಮ
ಪ್ರಜ್ಞಾಪೂರ್ವಕ ನಿಯಂತ್ರಣ ಇರುವುದಿಲ್ಲ. ಇದು ದಿಢೀರಾಗಿ ಮತ್ತು
ಅನಿರ್ಬಂಧಿತವಾಗಿ ನಡೆಯುವ ಘಟನೆ. ನಗು
ಕೆಲವೊಮ್ಮೆ ಒಬ್ಬರಿಂದ ಒಬ್ಬರಿಗೆ ಹರಡುವುದುಂಟು. 1962ರ ಜನವರಿ 30 ರಂದು
ತಾಂಜಾನಿಯಾದ ವಸತಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ
ಮೂವರು ಹುಡುಗಿಯರು ಅದ್ಯಾವುದೋ ಕಾರಣದಿಂದ ನಗ ಹತ್ತಿದರು. ನಗುವನ್ನು
ಅವರಿಂದ ನಿಲ್ಲಿಸಲಾಗಲಿಲ್ಲ. ಅಷ್ಟೇ ಅಲ್ಲ, ಹೀಗೆ
ಅನಿರ್ಬಂಧಿತವಾಗಿ ನಗುತ್ತಿರುವ ಅವರನ್ನು ನೋಡಬಂದ ಇನ್ನೂ
ತೊಂಬತೈದು ವಿದ್ಯಾರ್ಥಿಗಳಿಗೆ ಇದು ಅಂಟಿಕೊಂಡಿತು. ಈ
ನಗುವನ್ನು ನಿಲ್ಲಿಸಲು ಸಾಧ್ಯವೇ ಆಗದ್ದರಿಂದ ಮಾರ್ಚ್
18 ರಂದು ಶಾಲೆಯನ್ನು ಮುಚ್ಚಲಾಯಿತು ಮತ್ತು ಎಲ್ಲಾ ವಿದ್ಯಾರ್ಥಿಗಳನ್ನು
ಮನೆಗೆ ಕಳುಹಿಸಲಾಯಿತು. ಎರಡೂವರೆ ವರ್ಷಗಳ ನಂತರ
ಈ ನಗು ನಿಂತಿತಂತೆ.
ಅಲ್ಲಿಯವರೆಗೂ ಅದು ಸುಮಾರು ಒಂದುಸಾವಿರ ಜನರ
ತುಟಿಗಳು ಒಂದಕ್ಕೊಂದು ಅಂಟಿಕೊಳ್ಳದಂತೇ ನೋಡಿಕೊಂಡಿತ್ತು!
ನಕ್ಕರೆ ಮುದಿಯಾಗುವ ಪ್ರಕ್ರಿಯೆ
ನಿಧಾನಗೊಳಿಸಬಹುದೆಂದು ಹೇಳುತ್ತಾರೆ. ನಗುವಾಗ ಮುಖದ ಸ್ನಾಯುಗಳು
ಸಡಿಲಾಗುತ್ತವೆ. ರಕ್ತ ಸಂಚಾರ ಚುರುಕುಗೊಳ್ಳುತ್ತದೆ.
ಸ್ವಾಭಾವಿಕವಾಗಿಯೇ ಮುಖದ ಸೌಂದರ್ಯ ಹೆಚ್ಚುತ್ತದೆ.
ಉಳಿದ ಭಾಗಗಳು ಮುದಿಯಾತ್ತವಲ್ಲ,ಮುಖದ
ಸೌಂದರ್ಯ ಹೆಚ್ಚಿ ಏನು
ಪ್ರಯೋಜನ ಎಂದುಕೊಳ್ಳಬೇಡಿ
.ನಗು ಇಡೀ ದೇಹಕ್ಕೆ ಆರೋಗ್ಯದಾಯಕ.
ಒತ್ತಡ ಹಾರ್ಮೋನುಗಳ ಏರುಪೇರಿನಿಂದ ಉಂಟಾಗುವ ಮಾನಸಿಕ ಒತ್ತಡಕ್ಕೆ
ನಗುವೊಂದೇ ಔಷಧ. ನಮ್ಮ ದೇಹಕ್ಕೆ
ಯವುದೇ ಗಂಡಾಂತರವಿರದೇ ಇರುವಾಗಲೂ ಇದೆಯೆಂದು ತಪ್ಪಾಗಿ ಭಾವಿಸಿ ಹಾರ್ಮೋನು
ಪ್ರತಿಕ್ರಿಯೆ ಉಂಟಾದಾಗ ಆ ಸ್ಥಿತಿಯನ್ನು
STRESS ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಿರು
ತಟ್ಟೆಗಳ ಸಂಖ್ಯೆಯು ರಕ್ತದಲ್ಲಿ ಅಧಿಕಗೊಳ್ಳುತ್ತದೆ. ಅಪಧಮನಿಗಳಲ್ಲಿ ರಕ್ತ ಸಂಚಾರಕ್ಕೆ ಅಡೆ-ತಡೆ ಉಂಟಾಗುತ್ತದೆ. ನಗುವುದರಿಂದ
ಒತ್ತಡ ಪ್ರಕ್ರಿಯೆಗೆ ಕಾರಣವಾಗುವ
ನ್ಯೂರೋ ಎಂಡೋಕ್ರೈನ್ ಹಾರ್ಮೋನುಗಳ ಸ್ರವಿಸುವಿಕೆ ತಗ್ಗುತ್ತದೆ.
ನಗುವಿನಿಂದಾಗಿ ಉಸಿರ್ನಾಳಗಳ ಒಳಮೇಲ್ಮೈಗೆ ಅಂಟಿಕೊಂಡಿರುವ ಲೋಳೆಗಳಲ್ಲಿ ಪ್ರತಿಕಾಯಗಳ (Immunoglobuline
A-15A) ಸಂಖ್ಯೆ ಹೆಚ್ಚುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಈ ಪ್ರತಿಕಾಯಗಳು ರೋಗಾಣುಗಳನ್ನು
ಹಿಮ್ಮೆಟ್ಟಿಸಿ ದೇಹಕ್ಕೆ ರಕ್ಷಣೆ ನೀಡುತ್ತದೆ.
ಕೋಪ, ದುಖಃ, ಭಯದಂತಹ ಋಣಾತ್ಮಕ
ಭಾವನೆಗಳು ನಮ್ಮ ದೇಹದಲ್ಲಿ ಜೀವರಾಸಾಯನಿಕ
ಏರು ಪೇರುಗಳನ್ನುಂಟು ಮಾಡುತ್ತವೆ. ನಗುವು ಈ ಋಣಾತ್ಮಕ
ಭಾವನೆಗಳನ್ನು ತೊಳೆದು ಹಾಕಬಲ್ಲದು.
ಯಾವುದೇ ಟಿ.ವಿ
ಸೀರಿಯಲ್ನಲ್ಲಿ ದೇವರು ಬಿದ್ದು
ಬಿದ್ದು ನಗುವ ದೃಶ್ಯವನ್ನು ನೋಡಿದ್ದೀರಾ?
ಸಾಧ್ಯವೇ ಇಲ್ಲ. ಏಕೆಂದರೆ ದೇವರು
ಸರ್ವಜ್ಞಾನಿ. ಆತನಿಗೆ ಎಲ್ಲ ಜೋಕುಗಳು
ಮೊದಲೇ ಗೊತ್ತಿರುತ್ತದಲ್ಲ?!.
ಲಂಡನ್ನಿಗೆ ಹೋದ ಬಂಟಾಸಿಂಗ್‍ನಲ್ಲಿ
ಯಾರೋ “ನೀನು ಖಾಲಿ ಹೊಟ್ಟೆಯಲ್ಲಿ
ಎಷ್ಟು ಮಸಾಲೆ ದೋಸೆಗಳನ್ನು ತಿನ್ನಬಲ್ಲೆಯಾ?”
ಎಂದು ಕೇಳಿದರು. ಬಂಟಾ “ಐದು” ಎಂದ. “ಅರೆರೆ, ಒಂದು
ಮಸಾಲೆ ದೋಸೆ ತಿಂದ ನಂತರ
ನಿನ್ನದು ಖಾಲಿ ಹೊಟ್ಟೆ ಹೇಗಾಗುತ್ತದೆ?”
ಎಂದು ಕೇಳಿದಾಗ ತನ್ನ ಪೆದ್ದುತನ
ತಿಳಿದು ಬಂಟಾ ಬಿದ್ದು ಬಿದ್ದು
ನಕ್ಕ. ಭಾರತಕ್ಕೆ ಬಂದು ಇದೇ ಪ್ರಶ್ನೆಯನ್ನು
ತನ್ನ ಹೆಂಡತಿಯಲ್ಲಿ ಬಂಟಾ ಕೇಳಿದ - “ನೀನು
ಖಾಲಿ ಹೊಟ್ಟೆಯಲ್ಲಿ ಎಷ್ಟು ಮಸಾಲೆ ದೋಸೆ
ತಿನ್ನಬಲ್ಲೆ?” “ಮೂರು” ಎಂದಳಾಕೆ. “ನೀನು ಐದು ಎಂದಿದ್ದರೆ
ಒಂದು ಒಳ್ಳೆ ಜೋಕ್ ಹೇಳುತ್ತಿದ್ದೆ” ಎಂದ ಬಂಟಾ.
ಎಲ್ಲಿ ನಗು ನಿಲ್ಲುತ್ತದೋ
ಅಲ್ಲಿಂದಲೇ ಇನ್ನೊಂದು ನಗು ಹುಟ್ಟಿಕೊಳ್ಳಬಲ್ಲದು!.
______________________________________________________
-ಉದಯ ಗಾಂವಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ