ಕನಸು ಕಾಣಲು ಕಣ್ಣು ಬೇಕಿಲ್ಲ!
ಜರ್ಮನಿಯ ಕೆಕುಲೆ ಹಾವೊಂದು
ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡ. ಆ
ಕನಸನ್ನು ಬೆಳಗ್ಗೆ ನೆನಪು ಮಾಡಿಕೊಂಡದ್ದೇ
ತಡ ಇದುವರೆಗೆ ಆತನನ್ನು ಕಾಡುತ್ತಿದ್ದ ಸಮಸ್ಯೆಗೆ
ನಿಚ್ಚಳವಾದ ಉತ್ತರ ದೊರೆತು ಆತ
ನಿರಾಳನಾದ. ಬೆಂಜಿನ್‍ನ ಪರಮಾಣು
ಹೇಗಿರಬಹುದೆಂಬುದೇ ಆತನ ಸಮಸ್ಯೆಯಾಗಿತ್ತು. ಇದುವರೆಗೂ
ಆತನಿಗೆ ಈ ಸಮಸ್ಯೆಯ ಕುರಿತು,
ದೂರದ ಸುಳಿವೂ ದೊರೆತಿರಲಿಲ್ಲ; ಈಗ
ಕನಸಿನಲ್ಲಿ ಅಂತಹ ಸುಳಿವು ದೊರೆತುಬಿಡಬೇಕೆ?
ಮುಚ್ಚಿದ ಸರಪಳಿಯ ಕಾರ್ಬನ್ ಉಂಗುರವೇ
ಬೆಂಜಿನ್‍ನ ಸಂರಚನೆ! ಮೂಲವಸ್ತುಗಳ
ಆಧುನಿಕ ಆವರ್ತಕ ಕೋಷ್ಟಕದ ರಚನೆಗೆ
ಆಧಾರವಾದ ಆವರ್ತಕ ಕೋಷ್ಟಕವೊಂದನ್ನು 1869 ರಲ್ಲೇ
ಡಿಮಿಟ್ರಿ ಮೆಂಡಲೀವ್ ರಚಿಸಿದ್ದರು. ಅವರ ಈ ಸಾಧನೆಗಾಗಿ
ದೊರೆಯಬಹುದಾಗಿದ್ದ ನೋಬೆಲ್ ಪ್ರಶಸ್ತಿ ಒಂದೇ ಒಂದು
ವೋಟಿನ ವ್ಯತ್ಯಾಸದಿಂದ ತಪ್ಪಿಹೋಗಿತ್ತು. ತಾನು ತಯಾರಿಸಿದ ಆವರ್ತಕ
ಕೋಷ್ಟಕವನ್ನು ಅದರ ಮೂಲ ರೂಪದಲ್ಲೇ
ಕನಸಿನಲ್ಲಿ ಕಂಡಿದ್ದರಂತೆ ಮೆಂಡಲೀವ್!. ಎಡಿಸನ್ ಬಲ್ಬ್ ತಯಾರಿಸುವಾಗಲೂ
ಇಂತಹ ಕನಸೊಂದರಿಂದ ಮಾರ್ಗದರ್ಶನ ಪಡೆದಿದ್ದರಂತೆ, ಐನ್‍ಸ್ಟೀನ್‍ರ
ಸಾಪೇಕ್ಷ ಸಿದ್ಧಾಂತದ ಹಿಂದೂ ಒಂದು ಕನಸು
ಕೆಲಸ ಮಾಡಿದೆಯಂತೆ. ಮೆಂಡಲೀವ್ರು ರಾತ್ರಿ ತನ್ನ
ಕನಸಿನಲ್ಲಿ ಕಂಡ ಆವರ್ತಕ ಕೋಷ್ಟಕವನ್ನೇ
ಬೆಳಗ್ಗೆ ಕಾಗದದಲ್ಲಿ ದಾಖಲಿಸಿ ಜಗತ್ತಿಗೆ ನೀಡಿದರು.
ಹಾಗಾದರೆ, ಅವರ್ತಕ ಕೋಷ್ಟಕ ತಯಾರಿಸುವಲ್ಲಿ
ಮೆಂಡಲೀವ್ ರ ಪರಿಶ್ರಮ, ಪ್ರಯತ್ನ ಏನೂ ಇಲ್ಲವೇ?.
ಇಲ್ಲದೆ ಏನು? ಮೆಂಡಲೀವ್‍ರಿಗಲ್ಲದೇ ಆ ಕನಸು ಇನ್ಯಾರಿಗೂ
ಬೀಳಲು ಸಾಧ್ಯವಿರಲಿಲ್ಲ. ಆವರ್ತಕ ಕೋಷ್ಟಕ ತಯಾರಿಸುವಲ್ಲಿ ಆವರ
ಸತತ ಪರಿಶ್ರಮ, ಅದೇ ಜಾಡಿನಲ್ಲಿಯೇ ಓಡುತ್ತಿದ್ದ
ಯೋಚನಾ ಕ್ರಮ, ಆವರ್ತಕ ಕೋಸ್ಟಕವನ್ನು
ತಯಾರಿಸಬೇಕೆಂಬ ಬಲವಾದ ಹಂಬಲ, ಇವುಗಳೇ
ಮೆಂಡಲೀವ್ರಲ್ಲಿ ಕನಸಾಗಿ ರೂಪು
ತಳೆದಿದ್ದವು.
ಏಕೆಂದರೆ, ನಮ್ಮ ನಿದ್ರಾ ಚಕ್ರದ
ಅಂತರ್ಗತ ಭಾಗವೇ ಆಗಿಹೋಗಿರುವ ಈ
ಕನಸುಗಳು ವ್ಯಕ್ತಿಯ ಇದುವರೆಗಿನ ಬದುಕಿಗೆ ಸಂಬಂಧವೇ ಇರದ
ಚಿತ್ರ ಸರಣಿಗಳಲ್ಲ. ಕನಸು ಕಾಣುವಾತನು ಹಂಬಲಿಸುವ
ಅಥವಾ ಆತನ ಬದುಕಿನಲ್ಲಿ ಸಂಭವಿಸುವ
ಸಂಗತಿಗಳಿಗೆ ಅನುರೂಪವಾದ ಚಿತ್ರಮಯ ಹೇಳಿಕೆಗಳೇ ಕನಸುಗಳು.
ನಮ್ಮ ನಿದ್ರೆ ನಾಲ್ಕು
ಹಂತಗಳುಳ್ಳ ಚಕ್ರ ಸರಣಿಗಳನ್ನೊಳಗೊಂಡಿರುತ್ತದೆ. ಇದನ್ನು ನಿದ್ರಾ
ಚಕ್ರ ಎನ್ನುವರು. ಈ ಚಕ್ರದ ಎಲ್ಲ
ಹಂತಗಳಲ್ಲೂ ಕನಸು ಬೀಳುತ್ತದಾದರೂ ಕೊನೆಯ
ಹಂತದಲ್ಲಿ ಬೀಳುವ ಕನಸು ಹೆಚ್ಚು
ಸ್ಪಷ್ಟವಾಗಿರುತ್ತದೆ. ಕನಸು ಮುಗಿದ ಐದಾರು
ನಿಮಿಷಗಳಲ್ಲೇ ಆ ಕನಸಿನ ಅರ್ಧದಷ್ಟು
ವಿವರಗಳು ಮರೆತು ಹೋಗುತ್ತವೆ. ಹತ್ತು-ಹದಿನೈದು ನಿಮಿಷಗಳಲ್ಲಿ ಶೇಕಡಾ
90 ರಷ್ಟು ವಿವರಗಳು ಮರೆಯಾಗಿಬಿಡುತ್ತವೆ, ಕೆಕುಲೆ,
ಮೆಂಡಲೀವ್, ಐನ್ಸ್ಟೀನ್ ತಮ್ಮ
ಫಲಪ್ರದ ಕನಸುಗಳನ್ನು ಕಂಡ ಆ ರಾತ್ರಿಯೇ ಇನ್ನೆಷ್ಟೋ
ಕನಸುಗಳನ್ನು ಕಂಡಿದ್ದರು. ಮರೆತಿದ್ದರು ಕೂಡಾ.
ಡ್ರೀಮ್ ಎನ್ನುವ ಇಂಗ್ಲೀಷ್
ಎನ್ನುವ ಪದವು ಮಧ್ಯಕಾಲೀನ ಇಂಗ್ಲೀಷ್‍ನ dreme ಎನ್ನುವ
ಪದದಿಂದ ಜೀವ ತಳೆದಿದೆ. dreme
ಎಂದರೆ ಸಂತೋಷ ಎಂದರ್ಥ. ಆದರೆ
ಎಲ್ಲ ಕನಸುಗಳೂ ಸಂತೋಷಕರವಾಗಿರುವುದಿಲ್ಲ. ಭಯಾನಕ ಕನಸುಗಳು
ನಮ್ಮನ್ನು ನಿದ್ದೆಯಿಂದ ಎಚ್ಚರಿಸಿಬಿಡುತ್ತವೆ. ಕನಸಿನಲ್ಲಿ ನಡೆದ ಅನೇಕ ಘಟನೆಗಳು
ವಾಸ್ತವವಲ್ಲ ಎಂದು ಅರಿವಿಗೆ ಬರುತ್ತಿದ್ದಂತೆ
ನಮಗೆ ಸಂತೋಷವಾಗುತ್ತದೆ.
ಕನಸು ಒಂದು ಬಗೆಯ
ಆತ್ಮರಕ್ಷಣಾ ತಂತ್ರ. ನಮ್ಮ ಬಯಕೆಗಳು
ಮತ್ತು ನಿಜಜೀವನದಲ್ಲಿ ಅವುಗಳ ಈಡೇರಿಕೆಗಳ ನಡುವಿನ
ಅಂತರವನ್ನು ಇವು ಸಾಕಷ್ಟು ಕಿರಿದುಗೊಳಿಸುತ್ತವೆ.
ಒಬ್ಬ ವಿದ್ಯಾರ್ಥಿಗೆ ತನ್ನ ಉಪಾಧ್ಯಾಯರ ಬಗ್ಗೆ
ಸಿಟ್ಟು ಬರುತ್ತದೆ ಎಂದಿಟ್ಟುಕೊಳ್ಳಿ, ಆಗ ಆತನಿಗೆ ಅವರೊಡನೆ
ಜಗಳವಾಡಬೇಕೆನಿಸಬಹುದು. ಒಂದೆರಡು ಏಟುಗಳನ್ನು ಬಾರಿಸಬೇಕೆನ್ನಿಸಲೂಬಹುದು.
ಆದರೆ,
ಅದು ಆತನಿಂದ ಸಾಧ್ಯವಿಲ್ಲ. ಈಡೇರದಿರುವ
ಬಯಕೆ ಆತನಲ್ಲಿ ಮಾನಸಿಕ ಅಸಮತೋಲನವನ್ನುಂಟು
ಮಾಡುತ್ತದೆ. ಕನಸು ಆತನ ಮಾನಸಿಕ
ಅಸಮತೋಲನವನ್ನು ಕಡಿಮೆ ಮಾಡುತ್ತದೆ. ಹಾಗಂತ
ಕನಸು ಕಾಣದವರು ಮಾನಸಿಕ ಸಮತೋಲನವನ್ನು
ಸಾಧಿಸಿರುವವರು ಎಂದು ತಿಳಿದುಕೊಳ್ಳುವಂತಿಲ್ಲ; ಅವರು ಕನಸುಗಳನ್ನು
ಎಚ್ಚರಾಗುವ ಮುಂಚೆಯೇ ಮರೆತು ಹಾಕಿರಬಹುದು,
ಅದಲ್ಲದಿದ್ದರೆ ಅವರಿಗೆ ಪ್ರೋಟೀನ್‍ನ
ಕೊರತೆಯೋ, ಮಾನಸಿಕ ಕಾಯಿಲೆಗಳೋ ಇದ್ದಿರಬಹುದು!
ಸಾಮಾನ್ಯವಾಗಿ ನಾವು ಪ್ರತಿ ರಾತ್ರಿ
ಒಂದೆರಡು ಗಂಟೆಗಳಷ್ಟು ಕನಸು ಕಾಣುತ್ತೇವೆ. ನಮ್ಮ
ಜೀವನದ ಸುಮಾರು ಆರು ವರ್ಷಗಳಷ್ಟು
ಅವಧಿಯನ್ನು ಕನಸು ಕಾಣುವುದರಲ್ಲಿ ಕಳೆಯುತ್ತೇವೆ.
ಅಂಧರೂ ಕನಸು ಕಾಣುತ್ತಾರೆ; ಅವರ
ಕನಸುಗಳು ದೃಶ್ಯಮಯವಾಗಿರುತ್ತವೆಯೇ ಎಂಬುದು ಅವರು ಯಾವಾಗಿನಿಂದ
ನೋಡುವ ಸೌಲಭ್ಯವನ್ನು ಕಳೆದುಕೊಂಡರು ಎಂಬುದನ್ನು ಅವಲಂಬಿಸಿದೆ. ಹುಟ್ಟುಗುರುಡರು ಕಾಣುವ ಕನಸುಗಳಲ್ಲಿ ದೃಶ್ಯಾನುಭವ
ಇರುವುದಿಲ್ಲ. ಶೃವ್ಯ, ಸ್ಪರ್ಷ, ಅನುಭವಗಳ
ಮೂಲಕ ಅವರು ಕನಸು ಕಾಣುತ್ತಾರೆ.
ಮಗು ಮೂರು ವರ್ಷಕ್ಕಿಂತ
ಚಿಕ್ಕದ್ದಾಗಿದ್ದರೆ ತನ್ನದೇ ಕನಸಿನಲ್ಲಿ ತಾನೇ
ಕಾಣಿಸಿಕೊಳ್ಳಲು ಸಾಧ್ಯವಿಲ್ಲವಂತೆ. ಬೆಕ್ಕಿನ ಕನಸಿನಲ್ಲಿ ಬರೀ
ಇಲಿಗಳಂತೆ... ಹೀಗೆಲ್ಲಾ ಮನಃಶಾಸ್ತ್ರಜ್ಞರು ಅಗೆದು ಬಗೆದು ಶೋಧಿಸಿದ್ದಾರೆ.
ಗೊರಕೆ ಹೊಡೆಯುವವರ ಪಕ್ಕ
ಮಲಗುವ ದುರಾದೃಷ್ಟವಂತರಿಗೆ ಕನಸು ಕಾಣುವ ಸೌಭಾಗ್ಯವೇ
ಇಲ್ಲವೆಂದು ಕೊಂಡಿದ್ದರೆ ಅದು ತಪ್ಪು. ಗೊರಕಾಸುರರೆಷ್ಟೇ
ಕಾಟ ಕೊಟ್ಟಿದ್ದರೂ ಅವರು ಒಂದಿಷ್ಟು ನಿದ್ದೆ
ಮಾಡಿರಬಹುದು, ಕನಸೂ ಕಂಡಿರಬಹುದು.
ನಿದ್ದೆಯುದ್ದಕ್ಕೂ ಗೊರಕೆಹೊಡೆಯುವಾತ ಮಾತ್ರ ಕನಸು ಕಾಣಲು
ಸಾಧ್ಯವಿಲ್ಲ!!
ಉದಯ ಗಾಂವಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ