ಜೂನ್ 28, 2013

ಜೇಡದೊಂದಿಗೆ ಮಾತುಕತೆ


   
          




  ಜೀವಿಯೊಂದರ ಜೊತೆ ಸಂಭಾಷಣೆ ನಡೆಸಿದಂತೆ ಕಲ್ಪಿಸಿ ಆ ಜೀವಿಯ ಬಗ್ಗೆಹೆಚ್ಚಿನ ವಿಷಯವನ್ನುತಿಳಿದುಕೊಳ್ಳುವಂತಹ ಶೈಲಿಯನ್ನು ಅನೇಕರು ಮೆಚ್ಚಿಕೊಂಡಿದ್ದರು. ಅದೇ ರೀತಿಯಲ್ಲಿ ಈ ವಾರದ ಜನ-ವಿಜ್ಞಾನದಲ್ಲಿ ಜೇಡವೊಂದರ ಜೊತೆ  ಮಾತುಕತೆ ನಡೆಸಲಾಗಿದೆ. ಕಲ್ಪಿತ ಸಂದರ್ಶನದ ಭಾಗವನ್ನುಇಲ್ಲಿ ಪ್ರಕಟಿಸಲಾಗಿದೆ. ( ಸಂಪಾದಕರು,ಜನಪ್ರತಿನಿಧಿ ಪತ್ರಿಕೆ)
                


                * ನಮಸ್ಕಾರ
                ಜೇಡ : ನಮಸ್ಕಾರ, ನಿಮ್ಮೆಲ್ಲ ಓದುಗರಿಗೂ ಸಂಕ್ರಮಣದ ಶುಭಾಶಯಗಳು
                * ಹಬ್ಬದಶುಭಾಶಯವೇ? ನಾವು, ಮಾನವರು ಹಬ್ಬಬಂತೆಂದರೆ ಮನೆಯನ್ನು ಚೊಕ್ಕಟಗೊಳಿಸುತ್ತೇವೆ. ಆ ಕೆಲಸದಲ್ಲಿ ಜೇಡರ ಬಲೆಗಳನ್ನುತೆಗೆದುಹಾಕುವುದೂ ಬರುತ್ತದೆ.
                ಜೇಡ : ಬಲೆ ನೇಯುವುದುನಮ್ಮಕೆಲಸ. ಅದನ್ನು ನಾವು ಬದುಕಿರುವವರೆ ಗೂಮಾಡುತ್ತಲೇ ಇರುತ್ತೇವೆ. ಬಲೆ ನೇಯುವಾಗ ಅನೇಕ ವಿಘ್ನಗಳು ಉಂಟಾಗುತ್ತವೆ. ಬಲೆ ಹರಿದುಹೋಗುತ್ತಲೇ ಇರುತ್ತದೆ. ಆದರೆ ನಾವು ಪ್ರಯತ್ನ ಮುಂದುವರಿಸುತ್ತಲೇ ಇರುತ್ತೇವೆ. ಈ ಭೂಮಿಯ ಮೇಲೆ ಕಳೆದ ನಾಲ್ಕು ನೂರು ಮಿಲಿಯ ವರ್ಷಗಳಿಂದಲೂ ನಮ್ಮ ಸಂತತಿ ಜೀವಿಸುತ್ತಿದೆ. ನಾವಿದೇ ಕೆಲಸದಲ್ಲಿ ಆಗಿಂದಲೂ ನಿರತರಾಗಿದ್ದೇವೆ.
                * ನೀವು ಬಲೆ ನೇಯುವುದು ಯಾವ ಉದ್ದೇಶಕ್ಕಾಗಿ?
                ಜೇಡ : ಬಲೆನಮ್ಮ ಆಹಾರ ಬೇಟೆಯ ಹೊಂಚು. ಈ ಬಲೆಯಲ್ಲಿ ಕೀಟಗಳು ಸಿಕ್ಕಿಕೊಳ್ಳುವಂತೆ ಮಾಡಿ ಅವುಗಳನ್ನು ಬೇಟೆಯಾಡುವುದು ನಮ್ಮ ಉದ್ದೇಶ.  ಇದಲ್ಲದೇ ಮೊಟ್ಟೆ ಇಡುವ ಸ್ಥಳವಾಗಿ, ಜಂಪಿಂಗ್ ಬೋರ್ಡ್ ಆಗಿ ಇಲ್ಲವೆ ಮನೆಯಾಗಿಯೂ ಬಲೆಯ ಉಪಯೋಗವಿದೆ.
                * ಕೀಟಗಳು ಹೇಗೆ ಸಿಕ್ಕಿಕೊಳ್ಳುತ್ತವೆ?
                ಜೇಡ : ಕೀಟಗಳು ಬಲೆಯನ್ನು ದಾಟುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಲೆಗೆ ಅಂಟಿಕೊಳ್ಳುತ್ತವೆ. ಬಲೆಯ ದಾರಗಳಲ್ಲಿ ಅಂಟು ಪದಾರ್ಥವಿರುತ್ತದೆ.
                * ನಿಮ್ಮ ಬಲೆಯಲ್ಲಿ ನೀವೇ ಏಕೆ ಸಿಕ್ಕಿಕೊಳ್ಳುವುದಿಲ್ಲ?
                ಜೇಡ : ಇದು ಬಹಳ ಜನ ಕೇಳುವ ಪ್ರಶ್ನೆ. ಏಕೆಂದರೆ ಮಾನವರು ಸಾಮಾನ್ಯವಾಗಿ ಅವರೇ ಹೆಣೆದ ಬಲೆಯಲ್ಲಿ ಸಿಕ್ಕಿಕೊಂಡುಬಿಡುತ್ತಾರೆ. ಹ್ಹ...ಹ್ಹ...ಹ್ಹ (ಬಾಯ್ತುಂಬಾನಗುವುದು).
                * ನೀವು ನನ್ನಪ್ರಶ್ನೆಗೆ ಉತ್ತರಿಸಲೇ ಇಲ್ಲ?
                ಜೇಡ : ... ಹೌದಲ್ಲ... ನಾವು ಬಲೆ ಕಟ್ಟುವಾಗ ಎರಡು ಬೇರೆ ಬೇರೆ ಲಕ್ಷಣಗಳ ಎಳೆಗಳನ್ನು ತಯಾರಿಸುತ್ತೇವೆ. ಅವುಗಳಲ್ಲಿ ಒಂದು ಅಂಟಾಗಿರುತ್ತದೆ ಆದರೆ, ಇನ್ನೊಂದಕ್ಕೆ ಅಂಟುವ ಗುಣ ಇರುವುದಿಲ್ಲ. ಈರಹಸ್ಯ ನಮಗೆ ಗೊತ್ತಿರುತ್ತದೆ. ನಾವು ಅಂಟದ ಎಳೆಗಳನ್ನು ಬಳಸಿ  ಬಲೆಯ     ಮೇಲೆ ಚಲಿಸುತ್ತೇವೆ. ಅಲ್ಲದೇ, ನಮ್ಮಕಾಲಿಗೆ ಅಂಟು ತಾಗದ ಹಾಗೆ ಜಿಡ್ಡಿನ ಪದರವೊಂದಿರುತ್ತದೆ.
                * ಎಲ್ಲ ಜೇಡಗಳೂ ಒಂದೇವಿನ್ಯಾಸದ ಬಲೆ ಕಟ್ಟುತ್ತವೆಯೇ?
                ಜೇಡ : ಇಲ್ಲ. ಸಸ್ತನಿಗಳಲ್ಲಿ ಕೇವಲ 4,000 ಪ್ರಬೇಧಗಳಿದ್ದರೆ ನಮ್ಮಲ್ಲಿ 40,000 ಪ್ರಬೇಧಗಳಿವೆ. ಪ್ರತಿ ಪ್ರಬೇಧವೂ ಒಂದೊಂದು ವಿನ್ಯಾಸದಲ್ಲಿ ಬಲೆ ನೇಯುತ್ತದೆ.
                * ಎಲ್ಲಜೇಡಗಳು ಬಲೆ ನೇಯುತ್ತವೆಯೇ?
                ಜೇಡ : ಇಲ್ಲ, ಕೆಲವು ಪ್ರಬೇಧದ ಜೇಡಗಳು ಬಲೆ ಹೆಣೆಯುವುದಿಲ್ಲ. ಬಲೆ ಹೆಣೆಯದ ಜೇಡಗಳು ತಮ್ಮ ಬೇಟೆಯನ್ನು ಮುನ್ನುಗ್ಗಿಹಿಡಿಯುತ್ತವೆ. ಇಂತಹುಗಳಲ್ಲಿ ಪಕ್ಷಿಗಳನ್ನು ಬೇಟೆಯಾಡುವ ಪ್ರಬೇಧದ ಜೇಡಗಳೂಸೇರುತ್ತವೆ.
                * ಜೇಡಗಳುವಿಷಕಾರಿಯೇ?
                ಜೇಡ : ಹೌದು, ಜೇಡಗಳು ವಿಷಪದಾರ್ಥವನ್ನುಹೊಂದಿವೆ. ಅದರ ಪ್ರಮಾಣ ಬೇರೆಬೇರೆ ಆಗಿರುತ್ತದೆ. ಈ ವಿಷವಸ್ತುಗಳನ್ನು ಬಳಸಿ ಅವು ಬೇಟೆಯನ್ನು ಸಾಯಿಸಬಲ್ಲವು ಇಲ್ಲವೇ ನಿಷ್ಕ್ರೀಯಗೊಳಿಸಬಲ್ಲವು. ಕಪ್ಪುವಿಧವೆಎಂಬಜೇಡವಿದೆ,   ಇದುತುಂಬಾವಿಷಕಾರಿ, ಕಪ್ಪುವಿಧವೆ ಜೇಡಮನುಷ್ಯನನ್ನೂ ಸಾಯಿಸಬಲ್ಲದು.
                * ಆ ಜೇಡಕ್ಕೆ ಕಪ್ಪುವಿಧವೆ ಎಂದು ಏಕೆ ಕರೆಯುತ್ತಾರೆ?
                ಜೇಡ : ಲೈಂಗಿಕ ಸಂಪರ್ಕದ ನಂತರ ಆಜೇಡ ಗಂಡನನ್ನು ಸಾಯಿಸುತ್ತದೆ.
                * ನೀವು ಕೀಟಗಳಲ್ಲವೇ?
                ಜೇಡ : ಅಲ್ಲ, ಬಹಳಮಟ್ಟಿಗೆ ಕೀಟಗಳನ್ನು ಹೋಲುತ್ತೇವಾದರೂ ನಾವು ಅರಾಕ್ನಿಡಾ ಎಂಬವರ್ಗಕ್ಕೆ ಸೇರುತ್ತೇವೆ. ಕೀಟಗಳಿಗೆ ಮೂರುಜೊತೆ ಕಾಲುಗಳಿದ್ದರೆ ನಮಗೆ ಎಂಟುಕಾಲುಗಳಿರುತ್ತದೆ.
                * ಎಂತಹ ವಸ್ತುವಿನಿಂದ ನೀವು ಎಳೆ ತಯಾರಿಸುತ್ತೀರಿ?
                ಜೇಡ : ಅಮಿನೋಆಮ್ಲಗಳಉದ್ದಸರಪಳಿಯನ್ನು ನೀವುಪ್ರೋಟೀನ್ ಎಂದುಕರೆಯುತ್ತೀರಿ.  ಅದನ್ನೇ ನಾವು ದ್ರಾವಣವಾಗಿಸಿ ಎಳೆತಯಾರಿಸುತ್ತೇವೆ. ತೀರಾ ಸೂಕ್ಷ್ಮವಾದ ಎಳೆಗಳಿವು. ಆದರೆಬಹಳಬಲಿಷ್ಟ. ಈಎಳೆಗಳು ಅದೇ ದ್ರವ್ಯರಾಶಿಯ ಕಬ್ಬಿಣಕ್ಕಿಂತ ಐದು ಪಟ್ಟುಬಲಿಷ್ಟ.
                * ನೀವು ಬಲೆಯ ಇನ್ನೊಂದು ಮೂಲೆಯಲ್ಲಿರುವಾಗ ಮತ್ತೊಂದುಮೂಲೆಯಲ್ಲಿ ಸಿಕ್ಕಿಬಿದ್ದ ಅತಿಚಿಕ್ಕಕೀಟದ ಸುಳಿವು ದೊರೆಯುವುದುಹೇಗೆ?
                ಜೇಡ : ನಮ್ಮಕಾಲಿಗೆ ಟ್ರೈಕೋಬೊಥ್ರಿಯಾ ಎಂಬ ಹೆಚ್ಚುವರಿ ಕೂದಲುಗಳಿರುತ್ತವೆ. ಇವು ಬಲೆಯಲ್ಲುಂಟಾಗುವ ಅತಿಸೂಕ್ಷ್ಮಕಂಪನಗಳನ್ನು ಗ್ರಹಿಸಬಲ್ಲವು. ಬಲೆಅಲ್ಲಾಡಿದಂತೆ ನಮಗೆ ಬೇಟೆಯ ವಾಸನೆ ಬಡಿದಹಾಗೆ;  ಬಲೆಯ ಕಂಪನದ ಪ್ರಮಾಣದ ಮೇಲೆ ನಾವು ನಮ್ಮ ಬೇಟೆಯ ಗಾತ್ರದ ಬಗ್ಗೆ ಊಹಿಸಬಲ್ಲೆವು.
                * ಇದುವರೆಗೆ ನಮ್ಮೊಡನೆ ಕೆಲವು ಉಪಯುಕ್ತಮಾಹಿತಿಗಳನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು. ನಮ್ಮಓದುಗರಿಗೆ ನಿಮ್ಮಸಂದೇಶವೇನು?
                ಜೇಡ : “ಮರಳಿಯತ್ನವಮಾಡುಇದೇನನ್ನಸಂದೇಶ. ಧನ್ಯವಾದಗಳು.

ಜೂನ್ 27, 2013

ನೀರು! ನೀರು.......!!






                ಸಾಯುತ್ತಿರುವಾತನ ಉದ್ಘಾರವಿದಲ್ಲ. ಬದುಕಿರುವವರೆಲ್ಲರ ಕೂಗು ಇದು. ನೀರಿಗೆ ಜೀವನ ಎಂತಲೂ ಕರೆಯುತ್ತಾರೆ. ಈಜೀವ ಇರುವುದೇ ನೀರಿನಿಂದಾಗಿ ಜೀವಹುಟ್ಟಿಕೊಂಡದ್ದೂ ನೀರಿನಿಂದಲೇ!
                ನೀನು ಯಾರು ಎಂದು ಯಾರಾದರು ನಿಮ್ಮನ್ನು ಕೇಳಿದರೆ, “ಮುಕ್ಕಾಲುಪಾಲುನೀರುಎನ್ನುವುದೇ ನೂರು ಶೇಖಡಾ ಸರಿಯಾದ ಉತ್ತರ. ಇನ್ನು ಕಾಲು ಭಾಗ ನೀವು ಯಾರು ಎಂಬುದು ನಿಮಗೂ ಗೊತ್ತಿಲ್ಲ. ನೀವಷ್ಟೇಅಲ್ಲ, ಒಂದು ಸಸ್ಯವನ್ನೋ, ಹಣ್ಣನ್ನೋ, ಬೆಕ್ಕನ್ನೋಎತ್ತಿಕೊಳ್ಳಿ, ಅದರಶೇಕಡಾ 70ಕ್ಕಿಂತ ಹೆಚ್ಚು ಭಾಗವು ನೀರಿನಿಂದಲೇ ಆಗಿರುತ್ತದೆ. ಅಷ್ಟೇಕೆ ಭೂಮಿಯ ಮೇಲ್ಮೈನ ಶೇಕಡಾ 70% ರಷ್ಟು ಭಾಗಗವು ನೀರಿನಿಂದಾವರಿಸಿದೆ. ಇಷ್ಟುನೀರಿದ್ದರೂ ಅದರಲ್ಲಿ ಕುಡಿಯಲು ಯೋಗ್ಯವಾದ ನೀರು ನೂರರಲ್ಲಿ ಒಂದು ಪಾಲಷ್ಟೇ!
                ನೀರಿನಿಂದ ಜೀವಿಗಳು ಹುಟ್ಟಿಕೊಂಡಿದ್ದಷ್ಟೇಅಲ್ಲ, ಅನೇಕ ನಾಗರೀಕತೆಗಳೂ ಹುಟ್ಟಿಕೊಂಡಿವೆ. ನೀರಿಗಾಗಿ ನಡೆದಜಗಳಗಳಿಗೆ ಕೊನೆಮೊದಲು ಎಂಬುದೇಇಲ್ಲ. ಇತಿಹಾಸದ ಗರ್ಭದಲ್ಲಿ ಇಂತಹಎಷ್ಟೋ ಜಗಳಗಳು ಮುಗುಮ್ಮಾಗಿ ಮುದುಡಿಕೊಂಡಿದೆ. ಅವು ಆಗಾಗ ಎದ್ದು ಬಂದು ಸಾರ್ವಜನಿಕ ನಳ್ಳಿಗಳ ಬಳಿ, ಮಂಡ್ಯ, ಮೈಸೂರು ಮತ್ತಿತರ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಹರಿವ ನದಿ ಪಾತ್ರದ ಬಳಿ ಕಾಣಿಸಿಕೊಳ್ಳುತ್ತದೆ. ನೀರಿನಿಂದಲೇ ಜನ ಬದುಕಿಕೊಂಡಿರುವಂತೆ, ನೀರಿಗಾಗಿ ನಡೆವ ಜಗಳಗಳಿಂದಲೇ ಕೆಲವರು ಬದುಕಿಕೊಂಡಿದ್ದಾರೆ!
                ಇಬ್ಬರು ಹೀರೋಗಳು ತಮ್ಮಬದುಕಿಗೆ ಆಕ್ಸಿಜನ್ ಆಗಬಲ್ಲ ಒಬ್ಬಳು ಹೀರೋಯಿನ್ಗಾಗಿ ಹೊಡೆದಾಡುವ ಕಥೆ ಇರುವ ಸಿನೆಮಾಗಳು ನಮ್ಮಲ್ಲಿ ಬಹಳಷ್ಟಿವೆ. ಅವುಗಳಲ್ಲೊಂದಕ್ಕೆH2O ಎಂದೇ ಹೆಸರಿರುವುದು ನಿಮಗೆ ಗೊತ್ತು. “ನೀರು ಬರೀ H2O ಅಲ್ಲ-ಜಲಜನಕ ಮತ್ತು ಆಮ್ಲಜನಕಗಳ ಪರಿಪೂರ್ಣಕಾಂಬಿನೇಷನ್ ಅಷ್ಟೇಅಲ್ಲ; ಇದರಲ್ಲಿ ಇನ್ನೆನೋ ಇದೆ. ಅದೇ ನೀರನ್ನು ಇಷ್ಟು ಮಹತ್ವದ ವಸ್ತುವನ್ನಾಗಿಸಿದೆಎಂದ ಡಿ.ಎಚ್.ಲಾವರೆನ್ಸ್ರ ಮಾತನ್ನುಇಲ್ಲಿ ಹೇಳಲೇಬೇಕು. ಅಂತಹದ್ದೇನಿದೆ ನೀರಿನಲ್ಲಿ?
                ನೀರಿನ ಒಂದು ಅಣುವಿನಲ್ಲಿ ಇರುವುದು ಎರಡು ಜಲನಕದಪರಮಾಣುಳು ಮತ್ತು ಹೈಡ್ರೋಜನ್ ಪರಮಾಣು. ಇವುಗಳ ನಡುವೆ ಎಲೆಕ್ಟ್ರಾನ್ ಹಂಚಿಕೆಯಿಂದಾದ ಒಂದು ಕೋವಲೆಂಟ್ ಬಂಧ! ಅಕ್ಕಪಕ್ಕದ ಎರಡು ನೀರಿನ ಅಣುಗಳ ನಡುವೆ ಇನ್ನೂ ಒಂದು ಬಂಧ ಇರುತ್ತದೆ- ಅದೇ ಜಲಜನಕದ ಬಂಧ. ಈಬಂಧದಿಂದಾಗಿಯೇ ನೀರು ಸಾಮಾನ್ಯ ತಾಪದಲ್ಲಿ ದ್ರವರೂಪದಲ್ಲಿರಲು ಸಾಧ್ಯವಾಗಿರುವುದು. ಈ ಬಂಧದಿಂದಾಗಿಯೇ ನೀರುಸಾರ್ವತ್ರಿಕ ದ್ರಾವವಾಗಿರುವುದು. ಈಬಂಧದಿಂದಾಗಿಯೇ ನಾವು-ನೀವು,  ಜೀವಿಗಳೆಲ್ಲ ಬದುಕಿರುವುದು!
                ಯಾವೋಗ್ರಹಾಮ್ಎನ್ನುವವರು ನೀರನ್ನು 21ನೇಶತಮಾನದ ಪೆಟ್ರೋಲಿಯಂ ಎಂದುಬಣ್ಣಿಸಿದ್ದಾರೆ. ಇದೊಂದು ಅತ್ಯಂತ ತಪ್ಪು ಹೋಲಿಕೆ. ನೀರಿಗೆ ಹೋಲಿಕೆಯಾಗಬಲ್ಲ ಅಥವಾ ಬದಲಿಯಾಗಬಲ್ಲ ಇನ್ನೊಂದು ವಸ್ತು ಇಲ್ಲವೇ ಇಲ್ಲ. ಪೆಟ್ರೋಲ್ ಇಲ್ಲದೇ ಮಾನವ ಬದುಕಬಹುದು. ಹಾಗೆನೋಡಿದರೆ ತುಂಬಾ ಉತ್ತಮವಾಗೇ ಬದುಕಬಹುದು-ವಾಯುಮಾಲಿನ್ಯಮುಕ್ತವಾಗಿ, ಪೆಟ್ರೋಲ್ಗಾಗಿ ನಡೆಯಬಲ್ಲ ಯುದ್ಧದ ಭೀತಿ ಇಲ್ಲದೆ.

                ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆನಿರ್ಜಲೀಕರಣಎನ್ನುತ್ತಾರೆ. ಸೈನೋಸೈಟಿನ್ನಿಂದ ಕ್ಯಾನ್ಸರ್ವರೆಗೆ ಅನೇಕಖಾಯಿಲೆಗಳಿಗೆ ನೀರಿನ ಕೊರತೆಯೂ ಒಂದುಕಾರಣ. ಕಡಿಮೆ ನೀರುಕುಡಿಯುವುದು ಮತ್ತು ಮೂತ್ರಕೋಶದ ಕ್ಯಾನ್ಸರ್ಗೆ ತೀರಾ ಹತ್ತಿರದ ಸಂಬಂಧವಿದೆಯಂತೆ. ಕನಿಷ್ಟ ಪಕ್ಷ ಆರು ಗ್ಲಾಸ್ ನೀರನ್ನು ಪ್ರತಿದಿನ ಕುಡಿಯುವವರಿಗೆ ಹೃದಯಾಘಾತ ಮತ್ತು ಪಕ್ಷವಾತದ ಸಾಧ್ಯತೆ ಶೇಕಡಾ ಐವತ್ತರಷ್ಟು ಕಡಿಮೆಯಂತೆ. ಮೂತ್ರಕೋಶದಲ್ಲಿ ಹರಳುಂಟಾಗುವಿಕೆಯನ್ನು ನೀರುಕುಡಿಯುವುದರಿಂದನಿವಾರಿಸಬಹುದು. ಇನ್ನೊಂದುವಿಷಯ ಎಲ್ಲರಿಗೂ ತಿಳಿದೇ ಇದೆ. ಸಾಕಷ್ಟು ಪ್ರಮಾಣದಲ್ಲಿ ನೀರುಕುಡಿಯುವವರಷ್ಟೇ ಬೆಳಗ್ಗೆ ಶೌಚಕ್ಕೆಂದು ಹೋದಾಗ ಏನಾದರೂ ಸಾಧನೆ ಮಾಡಿಯಾರು, ಇಲ್ಲದಿದ್ದರೆವ್ಯರ್ಥಕಾಲಹರಣಮಾತ್ರ! ಮಲಬದ್ಧತೆಯೇ ನೂರಾರುಕಾಯಿಗಳ ಮಹಾತಾಯಿ ಎಂಬುದನ್ನು ಬೇರೆಹೇಳಬೇಕೇ? ತೂಕಕಡಿಮೆಮಾಡಿಕೊಳ್ಳಬೇಕಾದರೆ ನೀರುಕುಡಿಯಬೇಕು-ಇದರಲ್ಲಿಕೊಬ್ಬಿಲ್ಲ. ಕೊಲೆಸ್ಟ್ರಾಲ್ಇಲ್ಲ, ಕ್ಯಾಲೋರಿಯಂತೂ ಇಲ್ಲವೇ ಇಲ್ಲ. ನಾವುಉಸಿರಾಡುವ ಗಾಳಿಯಲ್ಲಿ ನೀರಿದ್ದರಷ್ಟೇ ಅನಿಲ ವಿನಿಮಯ ಸಾಧ್ಯ. ಯಂತ್ರಗಳ ಚಲಿಸುವಭಾಗಗಳ ಕೀಲುಗಳಲ್ಲಿ ಲ್ಯೂಬ್ರಿಕಂಟ್ ಇರುವ ಹಾಗೆ ನಮ್ಮಕೈ-ಕಾಲುಗಳ ಕೀಲುಗಳಿಗೆ ನೀರುಬೇಕು. ಬೆನ್ನುಮೂಳೆಗಳ ಸಣ್ಣಸಣ್ಣ ಸಂದುಗಳಲ್ಲಿಯೂ ನೀರು ಹೈಡ್ರಾಲಿಕ್ ಸಸ್ಪೆನ್ಷೆನ್ ತರಹಕೆಲಸ ಮಾಡುತ್ತದೆ.
                ನಿನ್ನ ಮೆದುಳಲ್ಲಿ ಏನು ತುಂಬಿಕೊಂಡಿದೆಯೋ ಎಂದು ಕೆಲವರು ಹೀಯಾಳಿಸುವುದುಂಟು. ಮೆದುಳಿನ ತೂಕದ  ಶೇಕಡಾ 85ರಷ್ಟು ನೀರೇ ಇರುವುದು.
     ಆದ್ಧರಿಂದ,ಸಾಕಷ್ಟು ನೀರು ಕುಡಿಯಿರಿ.ನೀರೆಂದರೆ ಚಹಾ ಅಲ್ಲ,ಕಾಫಿ ಅಲ್ಲ,ಕೋಲಾ ಅಲ್ಲ...ನೀರೆಂದರೆ ನೀರು!
                               
                                                                  **************
ಉದಯ ಗಾಂವಕಾರ

ಜೂನ್ 26, 2013

ಕನಸು ಕಾಣಲು ಕಣ್ಣು ಬೇಕಿಲ್ಲ!

ಕನಸು ಕಾಣಲು ಕಣ್ಣು ಬೇಕಿಲ್ಲ!
    
            ಜರ್ಮನಿಯ ಕೆಕುಲೆ ಹಾವೊಂದು ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡ. ಕನಸನ್ನು ಬೆಳಗ್ಗೆ ನೆನಪು ಮಾಡಿಕೊಂಡದ್ದೇ ತಡ ಇದುವರೆಗೆ ಆತನನ್ನು ಕಾಡುತ್ತಿದ್ದ ಸಮಸ್ಯೆಗೆ ನಿಚ್ಚಳವಾದ ಉತ್ತರ ದೊರೆತು ಆತ ನಿರಾಳನಾದ. ಬೆಂಜಿನ್ ಪರಮಾಣು ಹೇಗಿರಬಹುದೆಂಬುದೇ ಆತನ ಸಮಸ್ಯೆಯಾಗಿತ್ತು. ಇದುವರೆಗೂ ಆತನಿಗೆ ಸಮಸ್ಯೆಯ ಕುರಿತು, ದೂರದ ಸುಳಿವೂ ದೊರೆತಿರಲಿಲ್ಲ; ಈಗ ಕನಸಿನಲ್ಲಿ ಅಂತಹ ಸುಳಿವು ದೊರೆತುಬಿಡಬೇಕೆ? ಮುಚ್ಚಿದ ಸರಪಳಿಯ ಕಾರ್ಬನ್ ಉಂಗುರವೇ ಬೆಂಜಿನ್ ಸಂರಚನೆ! ಮೂಲವಸ್ತುಗಳ ಆಧುನಿಕ ಆವರ್ತಕ ಕೋಷ್ಟಕದ ರಚನೆಗೆ ಆಧಾರವಾದ ಆವರ್ತಕ ಕೋಷ್ಟಕವೊಂದನ್ನು 1869 ರಲ್ಲೇ ಡಿಮಿಟ್ರಿ ಮೆಂಡಲೀವ್ ರಚಿಸಿದ್ದರು. ಅವರ ಸಾಧನೆಗಾಗಿ ದೊರೆಯಬಹುದಾಗಿದ್ದ ನೋಬೆಲ್ ಪ್ರಶಸ್ತಿ ಒಂದೇ ಒಂದು ವೋಟಿನ ವ್ಯತ್ಯಾಸದಿಂದ ತಪ್ಪಿಹೋಗಿತ್ತು. ತಾನು ತಯಾರಿಸಿದ ಆವರ್ತಕ ಕೋಷ್ಟಕವನ್ನು ಅದರ ಮೂಲ ರೂಪದಲ್ಲೇ ಕನಸಿನಲ್ಲಿ ಕಂಡಿದ್ದರಂತೆ ಮೆಂಡಲೀವ್!. ಎಡಿಸನ್ ಬಲ್ಬ್ ತಯಾರಿಸುವಾಗಲೂ ಇಂತಹ ಕನಸೊಂದರಿಂದ ಮಾರ್ಗದರ್ಶನ ಪಡೆದಿದ್ದರಂತೆ, ಐನ್ಸ್ಟೀನ್ ಸಾಪೇಕ್ಷ ಸಿದ್ಧಾಂತದ ಹಿಂದೂ ಒಂದು ಕನಸು ಕೆಲಸ ಮಾಡಿದೆಯಂತೆ. ಮೆಂಡಲೀವ್ರು ರಾತ್ರಿ ತನ್ನ ಕನಸಿನಲ್ಲಿ ಕಂಡ ಆವರ್ತಕ ಕೋಷ್ಟಕವನ್ನೇ ಬೆಳಗ್ಗೆ ಕಾಗದದಲ್ಲಿ ದಾಖಲಿಸಿ ಜಗತ್ತಿಗೆ ನೀಡಿದರು. ಹಾಗಾದರೆ, ಅವರ್ತಕ ಕೋಷ್ಟಕ ತಯಾರಿಸುವಲ್ಲಿ ಮೆಂಡಲೀವ್ ರ ಪರಿಶ್ರಮ, ಪ್ರಯತ್ನ ಏನೂ ಇಲ್ಲವೇ?.
                ಇಲ್ಲದೆ ಏನು? ಮೆಂಡಲೀವ್ರಿಗಲ್ಲದೇ ಕನಸು ಇನ್ಯಾರಿಗೂ ಬೀಳಲು ಸಾಧ್ಯವಿರಲಿಲ್ಲ. ಆವರ್ತಕ ಕೋಷ್ಟಕ ತಯಾರಿಸುವಲ್ಲಿ ಆವರ ಸತತ ಪರಿಶ್ರಮ, ಅದೇ ಜಾಡಿನಲ್ಲಿಯೇ ಓಡುತ್ತಿದ್ದ ಯೋಚನಾ ಕ್ರಮ, ಆವರ್ತಕ ಕೋಸ್ಟಕವನ್ನು ತಯಾರಿಸಬೇಕೆಂಬ ಬಲವಾದ ಹಂಬಲ, ಇವುಗಳೇ ಮೆಂಡಲೀವ್ರಲ್ಲಿ ಕನಸಾಗಿ ರೂಪು ತಳೆದಿದ್ದವು.
                ಏಕೆಂದರೆ, ನಮ್ಮ ನಿದ್ರಾ ಚಕ್ರದ ಅಂತರ್ಗತ ಭಾಗವೇ ಆಗಿಹೋಗಿರುವ ಕನಸುಗಳು ವ್ಯಕ್ತಿಯ ಇದುವರೆಗಿನ ಬದುಕಿಗೆ ಸಂಬಂಧವೇ ಇರದ ಚಿತ್ರ ಸರಣಿಗಳಲ್ಲ. ಕನಸು ಕಾಣುವಾತನು ಹಂಬಲಿಸುವ ಅಥವಾ ಆತನ ಬದುಕಿನಲ್ಲಿ ಸಂಭವಿಸುವ ಸಂಗತಿಗಳಿಗೆ ಅನುರೂಪವಾದ ಚಿತ್ರಮಯ ಹೇಳಿಕೆಗಳೇ ಕನಸುಗಳು.
                ನಮ್ಮ ನಿದ್ರೆ ನಾಲ್ಕು ಹಂತಗಳುಳ್ಳ ಚಕ್ರ ಸರಣಿಗಳನ್ನೊಳಗೊಂಡಿರುತ್ತದೆ. ಇದನ್ನು ನಿದ್ರಾ ಚಕ್ರ ಎನ್ನುವರು. ಚಕ್ರದ ಎಲ್ಲ ಹಂತಗಳಲ್ಲೂ ಕನಸು ಬೀಳುತ್ತದಾದರೂ ಕೊನೆಯ ಹಂತದಲ್ಲಿ ಬೀಳುವ ಕನಸು ಹೆಚ್ಚು ಸ್ಪಷ್ಟವಾಗಿರುತ್ತದೆ. ಕನಸು ಮುಗಿದ ಐದಾರು ನಿಮಿಷಗಳಲ್ಲೇ ಕನಸಿನ ಅರ್ಧದಷ್ಟು ವಿವರಗಳು ಮರೆತು ಹೋಗುತ್ತವೆ. ಹತ್ತು-ಹದಿನೈದು ನಿಮಿಷಗಳಲ್ಲಿ ಶೇಕಡಾ 90 ರಷ್ಟು ವಿವರಗಳು ಮರೆಯಾಗಿಬಿಡುತ್ತವೆ, ಕೆಕುಲೆ, ಮೆಂಡಲೀವ್, ಐನ್ಸ್ಟೀನ್ ತಮ್ಮ ಫಲಪ್ರದ ಕನಸುಗಳನ್ನು ಕಂಡ ಆ ರಾತ್ರಿಯೇ ಇನ್ನೆಷ್ಟೋ ಕನಸುಗಳನ್ನು ಕಂಡಿದ್ದರು. ಮರೆತಿದ್ದರು ಕೂಡಾ.
                ಡ್ರೀಮ್ ಎನ್ನುವ ಇಂಗ್ಲೀಷ್ ಎನ್ನುವ ಪದವು ಮಧ್ಯಕಾಲೀನ ಇಂಗ್ಲೀಷ್  dreme ಎನ್ನುವ ಪದದಿಂದ ಜೀವ ತಳೆದಿದೆ. dreme ಎಂದರೆ ಸಂತೋಷ ಎಂದರ್ಥ. ಆದರೆ ಎಲ್ಲ ಕನಸುಗಳೂ ಸಂತೋಷಕರವಾಗಿರುವುದಿಲ್ಲ. ಭಯಾನಕ ಕನಸುಗಳು ನಮ್ಮನ್ನು ನಿದ್ದೆಯಿಂದ ಎಚ್ಚರಿಸಿಬಿಡುತ್ತವೆ. ಕನಸಿನಲ್ಲಿ ನಡೆದ ಅನೇಕ ಘಟನೆಗಳು ವಾಸ್ತವವಲ್ಲ ಎಂದು ಅರಿವಿಗೆ ಬರುತ್ತಿದ್ದಂತೆ ನಮಗೆ ಸಂತೋಷವಾಗುತ್ತದೆ.
                ಕನಸು ಒಂದು ಬಗೆಯ ಆತ್ಮರಕ್ಷಣಾ ತಂತ್ರ. ನಮ್ಮ ಬಯಕೆಗಳು ಮತ್ತು ನಿಜಜೀವನದಲ್ಲಿ ಅವುಗಳ ಈಡೇರಿಕೆಗಳ ನಡುವಿನ ಅಂತರವನ್ನು ಇವು ಸಾಕಷ್ಟು ಕಿರಿದುಗೊಳಿಸುತ್ತವೆ. ಒಬ್ಬ ವಿದ್ಯಾರ್ಥಿಗೆ ತನ್ನ ಉಪಾಧ್ಯಾಯರ ಬಗ್ಗೆ ಸಿಟ್ಟು ಬರುತ್ತದೆ ಎಂದಿಟ್ಟುಕೊಳ್ಳಿ, ಆಗ ಆತನಿಗೆ ಅವರೊಡನೆ ಜಗಳವಾಡಬೇಕೆನಿಸಬಹುದು. ಒಂದೆರಡು ಏಟುಗಳನ್ನು ಬಾರಿಸಬೇಕೆನ್ನಿಸಲೂಬಹುದು.  ಆದರೆ, ಅದು ಆತನಿಂದ ಸಾಧ್ಯವಿಲ್ಲ. ಈಡೇರದಿರುವ ಬಯಕೆ ಆತನಲ್ಲಿ ಮಾನಸಿಕ ಅಸಮತೋಲನವನ್ನುಂಟು ಮಾಡುತ್ತದೆ. ಕನಸು ಆತನ ಮಾನಸಿಕ ಅಸಮತೋಲನವನ್ನು ಕಡಿಮೆ ಮಾಡುತ್ತದೆ. ಹಾಗಂತ ಕನಸು ಕಾಣದವರು ಮಾನಸಿಕ ಸಮತೋಲನವನ್ನು ಸಾಧಿಸಿರುವವರು ಎಂದು ತಿಳಿದುಕೊಳ್ಳುವಂತಿಲ್ಲ; ಅವರು ಕನಸುಗಳನ್ನು ಎಚ್ಚರಾಗುವ ಮುಂಚೆಯೇ ಮರೆತು ಹಾಕಿರಬಹುದು, ಅದಲ್ಲದಿದ್ದರೆ ಅವರಿಗೆ ಪ್ರೋಟೀನ್ ಕೊರತೆಯೋ, ಮಾನಸಿಕ ಕಾಯಿಲೆಗಳೋ ಇದ್ದಿರಬಹುದು!
                ಸಾಮಾನ್ಯವಾಗಿ ನಾವು ಪ್ರತಿ ರಾತ್ರಿ ಒಂದೆರಡು ಗಂಟೆಗಳಷ್ಟು ಕನಸು ಕಾಣುತ್ತೇವೆ. ನಮ್ಮ ಜೀವನದ ಸುಮಾರು ಆರು ವರ್ಷಗಳಷ್ಟು ಅವಧಿಯನ್ನು ಕನಸು ಕಾಣುವುದರಲ್ಲಿ ಕಳೆಯುತ್ತೇವೆ. ಅಂಧರೂ ಕನಸು ಕಾಣುತ್ತಾರೆ; ಅವರ ಕನಸುಗಳು ದೃಶ್ಯಮಯವಾಗಿರುತ್ತವೆಯೇ ಎಂಬುದು ಅವರು ಯಾವಾಗಿನಿಂದ ನೋಡುವ ಸೌಲಭ್ಯವನ್ನು ಕಳೆದುಕೊಂಡರು ಎಂಬುದನ್ನು ಅವಲಂಬಿಸಿದೆ. ಹುಟ್ಟುಗುರುಡರು ಕಾಣುವ ಕನಸುಗಳಲ್ಲಿ ದೃಶ್ಯಾನುಭವ ಇರುವುದಿಲ್ಲ. ಶೃವ್ಯ, ಸ್ಪರ್ಷ, ಅನುಭವಗಳ ಮೂಲಕ ಅವರು ಕನಸು ಕಾಣುತ್ತಾರೆ.
                ಮಗು ಮೂರು ವರ್ಷಕ್ಕಿಂತ ಚಿಕ್ಕದ್ದಾಗಿದ್ದರೆ ತನ್ನದೇ ಕನಸಿನಲ್ಲಿ ತಾನೇ ಕಾಣಿಸಿಕೊಳ್ಳಲು ಸಾಧ್ಯವಿಲ್ಲವಂತೆ. ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳಂತೆ... ಹೀಗೆಲ್ಲಾ ಮನಃಶಾಸ್ತ್ರಜ್ಞರು ಅಗೆದು ಬಗೆದು ಶೋಧಿಸಿದ್ದಾರೆ.
                ಗೊರಕೆ ಹೊಡೆಯುವವರ ಪಕ್ಕ ಮಲಗುವ ದುರಾದೃಷ್ಟವಂತರಿಗೆ ಕನಸು ಕಾಣುವ ಸೌಭಾಗ್ಯವೇ ಇಲ್ಲವೆಂದು ಕೊಂಡಿದ್ದರೆ ಅದು ತಪ್ಪು. ಗೊರಕಾಸುರರೆಷ್ಟೇ ಕಾಟ ಕೊಟ್ಟಿದ್ದರೂ ಅವರು ಒಂದಿಷ್ಟು ನಿದ್ದೆ ಮಾಡಿರಬಹುದು, ಕನಸೂ ಕಂಡಿರಬಹುದು.
                ನಿದ್ದೆಯುದ್ದಕ್ಕೂ ಗೊರಕೆಹೊಡೆಯುವಾತ ಮಾತ್ರ ಕನಸು ಕಾಣಲು ಸಾಧ್ಯವಿಲ್ಲ!!

ಉದಯ ಗಾಂವಕಾರ